ಯಕ್ಷಗಾನ ಕಥಾವಲೋಕನ
ಪ್ರಸಂಗ: ಮಾತಂಗ ಕನ್ಯೆ
ಕವಿ: ಬೊಟ್ಟಿಕೆರೆ ಪುರುಷೋತ್ತಮ ಪೂಂಜ
ಯಕ್ಷಗಾನದ ಪ್ರಸಂಗದ ಪದಗಳಲ್ಲಿ ಅಡಕವಾಗಿರುವ ಕಥೆಯನ್ನು ಸಂಕ್ಷೇಪಿಸಿ, ಪ್ರಸಂಗದ ಎಲ್ಲಾ ಮುಖ್ಯ ಸನ್ನಿವೇಷಗಳನ್ನೊಳಗೊಳ್ಳುವಂತೆ ಬರೆದಿಡುವ ಪ್ರಯತ್ನ.
----
ದೇವೇಂದ್ರನ ಒಡ್ಡೋಲಗ, ಜ್ಞಾನಸತ್ರ ನಡೆಯುತ್ತಿರುತ್ತದೆ. ದೇವೇಂದ್ರ ಸಪ್ತರ್ಷಿಗಳೊಡನೆ ಸಂವಾದ ನಡೆಸುತ್ತಿರುತ್ತಾನೆ.
ಆಗ ಮುನಿಯೋರ್ವ ಮೂವರು ತರುಣಿಯರ ಜತೆ ಬರುತ್ತಾನೆ.
ಬಂದ ಮುನಿಯನ್ನು ಗೌರವಿಸಿ ಇಂದ್ರ ; ನೀವು ಯಾರು ನಿಮ್ಮ ಜತೆ ಬಂದಿರುವ ಮೂವರು ಬಾಲೆಯರು ಯಾರೆಂದು ವಿಚಾರಿಸುತ್ತಾನೆ.
ತನ್ನ ಹೆಸರು ಭರತನೆಂದೂ, ಶಿವನ ತಾಂಡವವನ್ನು ಅಭ್ಯಸಿಸಿ, ತಾನು ನಾಟ್ಯಶಾಸ್ತ್ರವನ್ನು ರಚಿಸಿದ್ದಾಗಿಯೂ, ಇದು ಸಾಮವೇದಕ್ಕೆ ಉಪವೇದವೆಂದೂ ಗಾಂಧರ್ವವೇದವೆಂದೂ ಇದನ್ನು ಕರೆಯುತ್ತಾರೆ, ತಾನು ಇದನ್ನು ಎಲ್ಲೆಡೆ ಪಸರಿಸುವ ಉದ್ದೇಶದಿಂದ ಬಂದಿರುವೆ, ಈ ಮೂವರು ತನ್ನ ಶಿಷ್ಯೆಯರು, ಇವರ ನೃತ್ಯ ಪ್ರದರ್ಶನಕ್ಕೆ ಅವಕಾಶವನ್ನು ಕೊಡಬೇಕಾಗಿಯೂ ಮುಂದಕ್ಕೆ ಈ ಕಲೆಯನ್ನು ಸ್ವರ್ಗದಲ್ಲಿ ಬೆಳೆಸಬೇಕೆಂದೂ ಭರತಮುನಿ ಇಂದ್ರನಲ್ಲಿ ಹೇಳುತ್ತಾನೆ.
ದೇವೇಂದ್ರ ಸರಿಯೆಂದೂ, ಮುಂದಕ್ಕೆ ಈ ಕಲೆ ಇಲ್ಲಿ ಬೆಳೆಯಲಿ ಎಂದು, ನೃತ್ಯ ಪ್ರದರ್ಶನ ಪ್ರಾರಂಭಿಸುವಂತೆ ಹೇಳುತ್ತಾನೆ
ಭರತಮುನಿಯ ಜತೆಗೆ ಬಂದ ಆತನ ಶಿಷ್ಯೆಯರಾದ ವಿಭಾವರಿ, ಚಾರುದೇಷ್ಣಾ, ಮಾಲಿನಿಯರು ನೃತ್ಯಪ್ರದರ್ಶನ ಪ್ರಾರಂಭಿಸುತ್ತಾರೆ.
ನೃತ್ಯಪ್ರದರ್ಶನ ಸಾಗುತ್ತಿರುತ್ತದೆ, ಕೆಲ ಸಮಯದ ಬಳಿಕ; ಮಾಲಿನಿ ಮತ್ತು ಚಾರುದೇಷ್ಣೆಯರ ನೃತ್ಯಕ್ಕೆ ದೇವೇಂದ್ರ ಪ್ರಾಧಾನ್ಯತೆ ಕೊಡುತ್ತಿದ್ದಾನೆಯೆಂದೂ ತನ್ನ ಕಡೆಗೆ ನೋಡುತ್ತಿಲ್ಲವೆಂದೂ ಅಸೂಯೆಯಿಂದ ವಿಭಾವರಿ ತಂತ್ರದಿಂದ , ಮಾಲಿನಿಯನ್ನು ಕಾಲೆಡವಿಸಿ ಬೀಳಿಸುತ್ತಾಳೆ, ಮಾಲಿನಿ ಚಾತುದೇಷ್ಣೆಯ ಮೇಲೆ ಬೀಳುತ್ತಾಳೆ, ಅವರಿಬ್ಬರ ನಡುವೆ ಜಗಳ ಪ್ರಾರಂಭವಾಗುತ್ತದೆ.
ಮೂವರೂ ಬೈಯ್ದಾಡಿಕೊಳ್ಳುತ್ತಾರೆ, ಪರಸ್ಪರ ದೋಷಾರೋಪಗಳನ್ನು ಮಾಡುತ್ತಾರೆ.
ಈ ದೃಶ್ಯವನ್ನು ಕಂಡ ಭರತಮುನಿ ಕೋಪಗೊಳ್ಳುತ್ತಾನೆ.
ದೇವಾರಾಧನೆಯ ಈ ಪವಿತ್ರ ಕಾರ್ಯದಲ್ಲೂ ಅಹಂಕಾರವನ್ನು ಬಿಡದೆ, ನಿಂತ ನೆಲೆಯನ್ನು ಮರೆತು ನಿಕೃಷ್ಟ ವರ್ತನೆಯನ್ನು ತೋರಿದ ನೀವೆಲ್ಲರೂ ಭುವಿಯಲ್ಲಿ ಹೀನಕುಲದಲ್ಲಿ ಜನಿಸಿ ಎಂದು ತನ್ನ ಮೂವರು ಶಿಷ್ಯೆಯರನ್ನು ಶಪಿಸಿ ಇಂದ್ರನ ಸಭೆಯಿಂದ ಹೊರಟುಹೋಗುತ್ತಾನೆ.
ತರುಣಿಯರು ಇಂದ್ರನ ಪದತಳದಲ್ಲಿ ಹೊರಳುತ್ತಾ ತಮ್ಮ ಶಾಪವನ್ನು ಪರಿಹರಿಸಬೇಕೆಂಬುದಾಗಿ ಕೇಳಿಕೊಳ್ಳುತ್ತಾರೆ.
ವಿಭಾವರಿಯೇ ಇದಕ್ಕೆಲ್ಲಾ ಮೂಲ ಕಾರಣವೆಂಬುದನ್ನು ಅರಿತಿದ್ದ ಇಂದ್ರ:
ವಿಭಾವರಿ ತನ್ನ ತಪ್ಪಿಗಾಗಿ ದೀರ್ಘಕಾಲ ಭೂಮಿಯಲ್ಲಿ ನರಳಬೇಕಾಗುತ್ತದೆ, ಮತ್ತೆ ಕಾಲಾಂತರದಲ್ಲಿ ಮಾನುಷರೂಪಿನಿಂದ ಅವತರಿಸುವ ದೇವನ ದರ್ಶನದಿಂದ ಆಕೆಯ ಶಾಪ ಪರಿಹಾರವಾಗಿ ದೇವಲೋಕವನ್ನು ಸೇರುತ್ತಾಳೆ, ಮತ್ತು ನೀವೀರ್ವರಿಗೆ ಕಾರಣವೊಂದರಿಂದಾಗಿ ವಿಶ್ವಾಮಿತ್ರನು ತಂದೆಯೆನಿಸುತ್ತಾನೆ, ಆತನ ಸಂಕಲ್ಪದಂತೆ ನಡೆಯುವುದರಿಂದ ನಿಮ್ಮ ಶಾಪ ಪರಿಹಾರವಾಗುವುದು ಮತ್ತು ನೀವು ದಿವವನ್ನು ಸೇರಿಕೊಳ್ಳುವಿರಿ ಎನ್ನುತ್ತಾನೆ.
==========
ಹರಿಶ್ಚಂದ್ರನ ಒಡ್ಡೋಲಗ
ವನಪಾಲಕರ ಪ್ರವೇಶ ಮತ್ತು ಕಾಡುಪ್ರಾಣಿಗಳಿಂದ ಬಂದ ಆಪತ್ತನ್ನು ಪರಿಹರಿಸಬೇಕೆಂಬ ಪ್ರಾರ್ಥನೆ
ಬೇಟೆ
ವರಾಹವೊಂದನ್ನು ಅಟ್ಟಿಸಿಕೊಂಡು ಹೋಗಿ ಹರಿಶ್ಚಂದ್ರ ಭೂಪತಿ ದಣಿಯುತ್ತಾನೆ.
ಕೌಶಿಕೀ ನದಿಯಲ್ಲಿ ಸ್ನಾನ ಅರ್ಘ್ಯಾದಿಗಳನ್ನು ವಿರಚಿಸಿ ವಿಶ್ರಮಿಸುತ್ತಾರೆ.
ಸಮೀಪದ ಆಶ್ರಮದಲ್ಲಿದ್ದ ವಿಶ್ವಾಮಿತ್ರ ಮುನಿ ಹರಿಶ್ಚಂದ್ರನ ಆಗಮನವನ್ನು ತನ್ನ ದಿವ್ಯದೃಷ್ಟಿಯಿಂದ ತಿಳಿಯುತ್ತಾನೆ.
ಹರಿಶ್ಚಂದ್ರನನ್ನು ಪರಿಕಿಸುವ ಕಾಲ ಬಂತೆಂದು ವಿಶ್ವಾಮಿತ್ರ, ದೇವಲೋಕದಲ್ಲಿ ವಸಿಷ್ಠನ ಜತೆಗೆ ನಡೆದಿದ್ದ ವಾದದ ಸಂದರ್ಭದ ತನ್ನ ಭಾಷೆಯನ್ನು ನೆನೆದು ಪಾದದಿಂದ ನೆಲವನ್ನು ಒದೆಯುತ್ತಾನೆ, ಆಗ ಈರ್ವರು ತರುಣಿಯರು ಉದಿಸಿ ಬರುತ್ತಾರೆ.
ಕೃಷ್ಣವರ್ಣದ ಈರ್ವರು ತರುಣಿಯರು ನೀವೆನ್ನ ಮಾನಸ ಪುತ್ರಿಯರೆಂದೂ, ಹರಿಶ್ಚಂದ್ರನ ಬಳಿಗೆ ತೆರಳಿ ನರ್ತನದಿಂದ ಆತನ ಮನಸ್ಸನ್ನು ಮೆಚ್ಚಿಸಿ, ಆ ಬಳಿಕ ಉಪಹಾರವಾಗಿ ಆತ ಏನು ಬೇಕೆಂದು ಯಾಚಿಸಲು, ಆತನ ಬೆಳ್ಗೊಡೆಯನ್ನು ಕೇಳಿ, ಆತ ತಪ್ಪಿದಲ್ಲಿ ನಿಮ್ಮನ್ನು ಮದುವೆಯಾಗುವಂತೆ ಕೇಳಿಕೊಳ್ಳಿ ಆಮೇಲೆ ನನ್ನಲ್ಲಿ ಅರುಹಿ ಎಂದು ಹೇಳುತ್ತಾನೆ.
ತರುಣಿಯರು ಬಂದು ಹರಿಶ್ಚಂದ್ರನ ಸಮ್ಮುಖದಲ್ಲಿ ನಾಟ್ಯವನ್ನಾಡುತ್ತಾರೆ, ನಾಟ್ಯಶಾಸ್ತ್ರದ ಮೂಲದಿಂದಲೇ ಅಭ್ಯಸಿಸಿದ್ದ ಕಾಮಿನಿಯರ ನಾಟ್ಯವನ್ನು ಕಂಡು ಹರಿಶ್ಚಂದ್ರ ಮೆಚ್ಚಿ ಬೇಕಾದ್ದನ್ನು ಕೇಳಿ ಪಡಕೊಳ್ಳಿ ಎಂದು ಹೇಳುತ್ತಾನೆ.
ಮುನಿಪತಿಯರುಹಿದ್ದಂತೆಯೇ ಅವರು ಬೆಳ್ಗೊಡೆಯನ್ನು ಯಾಚಿಸುತ್ತಾರೆ.
ಹರಿಶ್ಚಂದ್ರ ನಿರಾಕರಿಸುತ್ತಾನೆ ಮತ್ತು ಯಾಕೆ ಸಾಧ್ಯವಿಲ್ಲ ಎಂಬುದಕ್ಕೆ ಕಾರಣಗಳನ್ನು ಹೇಳುತ್ತಾನೆ.
ಸತಿಯರು ಒತ್ತಾಯಿಸುತ್ತಾರೆ, ಹರಿಶ್ಚಂದ್ರ ಬೇರೇನನ್ನಾದರೂ ಕೇಳಿ ಎನ್ನಲು ತಮ್ಮನ್ನು ವರಿಸುವಂತೆ ಕೇಳುತ್ತಾರೆ.
ಹೊಲತಿಯರೊಡನೆ ನೃಪವರನ ವಿವಾಹವೆಂದಿಗೂ ಸಲ್ಲದೆಂದು, ನಿರಾಕರಿಸುತ್ತಾನೆ. ಲಲನೆಯರು ವಾದಿಸುತ್ತಾರೆ ಒತ್ತಾಯಿಸುತ್ತಾರೆ, ಹರಿಶ್ಚಂದ್ರ ಚಾರರಿಂದ ಅವರಿಗೆ ಹೊಡೆಯಿಸುತ್ತಾನೆ, ಅವರು ಅಳುತ್ತಾ ಬಂದು ವಿಶ್ವಾಮಿತ್ರನಲ್ಲಿ ದೂರುತ್ತಾರೆ.
ವಿಶ್ವಾಮಿತ್ರ ಅವರನ್ನು ಸಂತೈಸಿ, ಅವರ ಶಾಪದ ಕುರಿತಾಗಿ ತಿಳಿಸಿ ಅವರ ಶಿರದಡವಿ ಅವರ ಶಾಪವಿಮೋಚನೆಯಾಗುವಂತೆ ಅನುಗ್ರಹಿಸುತ್ತಾನೆ, ಮಾಲಿನಿ, ಚಾರುದೇಷ್ಣೆಯರು ಸ್ವರ್ಗವನ್ನು ಸೇರುತ್ತಾರೆ.
ಕಶ್ಯಪ ಮಹರ್ಷಿ ಪ್ರಾಧೆಯಲ್ಲಿ ಇಬ್ಬರು ಗಂಧರ್ವರನ್ನು ಪಡೆದು ಸ್ವರ್ಗದಲ್ಲಿ ಸುಸ್ಥಾನಗಳನ್ನು ಕೊಡಿಸುತ್ತಾನೆ.ಅವರಲ್ಲಿ ಒಬ್ಬನಾದ ವಿಶ್ವಾವಸು ಒಮ್ಮೆ ವನವಿಹಾರಕ್ಕೆ ತನ್ನ ಮಡದಿಯರೊಡನೆ ತೆರಳುತ್ತಾನೆ.
ವನದಲ್ಲಿ ಸತಿಯರು ವಿಶ್ವಾವಸುವೊಡನೆ ಜಲಕ್ರೀಡೆಯಾಡುತ್ತಾರೆ, ಅಲ್ಲೇ ಹತ್ತಿರದಲ್ಲಿ ಸ್ಥೂಲಶಿರನೆಂಬ ಮಹರ್ಷಿ ತಪಸ್ಸನ್ನಾಚರಿಸುತ್ತಿರುತ್ತಾನೆ, ಗಂಧರ್ವನ ಜಲಕ್ರೀಡೆಯಿಂದ ತನ್ನ ತಪಸ್ಸಿಗೆ ಭಂಗವುಂಟಾಗಲು ಅಕಾಲದಲ್ಲಿ ಜಲಕ್ರೀಡೆಯಾಡುತ್ತಿರುವ ಗಂಧರ್ವನಿಗೆ ತಿಳಿಹೇಳಬೇಕೆಂದು ಅವರು ಜಲಕ್ರೀಡೆಯಾಡುತ್ತಿದ್ದಲ್ಲಿಗೆ ಬರುತ್ತಾನೆ.
ಬರುತ್ತಿರುವ ಮುನಿಯನ್ನು ಕಂಡು ಗಂಧರ್ವನ ಮಡದಿಯೋರ್ವಳು ವಿಶ್ವಾವಸುವಿನೊಡನೆ, ಮುನಿಯ ದೇಹಾಕಾರವನ್ನು ಕಂಡು ಹಾಸ್ಯದ ಮಾತುಗಳನ್ನಾಡುತ್ತಾಳೆ.
ವಿಶ್ವಾವಸು ಗಂಧರ್ವ ಮುನಿಯನ್ನು ಅಪಹಾಸ್ಯ ಮಾಡುತ್ತಾನೆ, ವಿಶ್ವಾವಸು ಮತ್ತು ಋಷಿಗಳ ಮಧ್ಯೆ ಮಾತುಗಳಾಗುತ್ತವೆ.
ಕೋಪಗೊಂಡ ಮುನಿ ಯೌವನ ಮದದಿಂದ ಉಬ್ಬಿರುವ ನೀನು ಭೀಕರಾಕೃತಿಯ ರಾಕ್ಷಸನಾಗು ಎಂದು ಶಪಿಸುತ್ತಾನೆ.
ಗಂಧರ್ವನ ದುಃಖ, ರಾಘವನ ದರ್ಶನದಿಂದ ನಿನಗೆ ಶಾಪವಿಮೋಚನೆ ಎಂದು ತಿಳಿಸಿ ಮುನಿ ನಿರ್ಗಮಿಸುತ್ತಾನೆ.
===========
ದಂಡಕಾರಣ್ಯದಲ್ಲಿ ನ್ಯಗ್ರೋಧನೆಂಬ ವ್ಯಾಧನ ಪ್ರವೇಷ, ಸಂತಾನವಿಲ್ಲೆಂಬ ಚಿಂತೆ, ದೈವಬಲವಿಲ್ಲವೆಂದು ಪತ್ನಿಯ ಮಾತು. ಹಾಗಾಗಿ ಮುನಿವರ್ಯರನ್ನು ಹುಡುಕುತ್ತಾ ಬರುತ್ತಾನೆ.
ಬಂದು ಬಂದು ತೆಂಕಣ ಕಾಡಿನಲ್ಲಿರುವ ಎಲೆಮನೆಯೊಂದನ್ನು ಕಂಡು ಅಲ್ಲಿಗೆ ಬಂದ ನ್ಯಗ್ರೋಧನಿಗೆ, ಕೃಷಕಾಯನಾದ ಋಷಿಯೋರ್ವ ಕಾಣುತ್ತಾನೆ. ಆತನ ಪರಿಸ್ಥಿತಿಯನ್ನು ಕಂಡು ಕನಿಕರಿಸಿ, ವ್ಯಾಧ ಕಾಡಿನಲ್ಲೆಲ್ಲಾ ಅಲೆದಾಡಿ ಕಂದಮೂಲ, ಜೇನು, ಹಣ್ಣು ಇತ್ಯಾದಿಗಳನ್ನು ತಂದು, ತಾವರೆ ಎಲೆಯ ದೊನ್ನೆಯಲ್ಲಿ ಜಲವನ್ನು ತಂದು ಮುನಿಗೆ ಸಮರ್ಪಿಸಿ ಭಕ್ತಿಯಿಂದ ಬೇಡಿಕೊಳ್ಳುತ್ತಾನೆ.
ಕರುಣಾಳುವೆ ಕಣ್ದೆರೆದೊಂದರೆ ಚಣ|
ನಿರುಕಿಪುದೆನ್ನನು ನೀದಯದಿ||
ಚರಣದೊಳಿರಿಸಿದೆನಿದು ನೈವೇದ್ಯವು| ಹರುಷದಿ ಕೊಳ್ಳೈ ಪುಣ್ಯ ನಿಧಿ||
ಘನ ಧ್ಯಾನಾಸಕ್ತರಾಗಿದ್ದ ಮತಂಗಮುನಿ ಎಚ್ಚರಗೊಂಡು, ಯೋಗಬಲದಿಂದ ನಿದ್ರಾಹಾರಗಳನ್ನು ತ್ಯಜಿಸಿರುವ ತನಗೆ ಇದ್ಯಾವುದರ ಅಗತ್ಯವಿಲ್ಲವೆಂದೂ, ನಿನ್ನ ದುಗುಡವನ್ನು ಅರುಹಿದರೆ ಪರಿಹಾರದ ಯತ್ನವನ್ನು ಮಾಡುವೆನೆಂದೂ ತಿಳಿಸುತ್ತಾನೆ.
ಧನ್ಯನಾದೆನಿಂದು ಋಷಿವರ| ನ್ಯಗ್ರೋಧ ನಾನು
ನಿನ್ನೊಳೀಗ ಬೇಡುತಿಹೆ ವರ||
ಚಿಣ್ಣರಿಲ್ಲದೊಂದು ಚಿಂತೆ|ಯೆನ್ನ ಸತತ ಕಾಡುತಿಹುದು|
ಪುಣ್ಯಮೂರ್ತಿ ಕರುಣಿಸಯ್ಯ ಮುದದಿ||
ಚೂತಫಲವೊಂದನ್ನು ಕೊಟ್ಟು ನಿನ್ನ ಸತಿಗೆ ಕೊಡೆಂದೂ ನಿಮಗೆ ಸಂತಾನವಾಗುತ್ತದೆಂದು ಮತಂಗಋಷಿ ಹರಸುತ್ತಾನೆ, ನ್ಯಗ್ರೋಧ ಅದನ್ನೊಯ್ದು ತನ್ನ ಸತಿಗೆ ಕೊಡುತ್ತಾನೆ.
=============
ಶಾಪಗ್ರಸ್ತ ವಿಶ್ವಾವಸುವಿನ ರಾಕ್ಷಸ ಜನ್ಮ:
ಘೋರರೂಪಿನಿಂದ ರಾಕ್ಷಸನಾಗಿ ಜನಿಸಿದ ಗಂಧರ್ವ ಋಷಿಗಳನ್ನು ಹಿಂಸಿಸುವುದು, ಯಾಗ ಯಜ್ಞಾದಿಗಳನ್ನು ಹಾಳೆಸಗುವುದು, ಮನುಷ್ಯವಧೆ ಇತ್ಯಾದಿ ವಿಧವಿಧವಾದ ಪಾತಕಗಳನ್ನು ಎಸಗುತ್ತಲಿರುತ್ತಾನೆ.
ಅತ್ತ ನ್ಯಗ್ರೋಧನ ಸತಿ, ಪುತ್ರಿಯೋರ್ವಳನ್ನು ಪಡೆಯುತ್ತಾಳೆ ಅವಳಿಗೆ ಶಬರಿ ಎಂದು ನಾಮವನ್ನಿರಿಸುತ್ತಾರೆ, ಆಕೆಯ ಜನ್ಮವನ್ನು ಅಬ್ಬರದಿಂದ ಆಚರಿಸುತ್ತಾರೆ.
ಆ ಸಂದರ್ಭದಲ್ಲಿ ರಾಕ್ಷಸರೂಪಿ ವಿಶ್ವಾವಸು ಅಲ್ಲಿಗೆ ಬರುತ್ತಾನೆ.
ನ್ಯಗ್ರೋಧನಿಗೂ ವಿಶ್ವಾವಸುವಿಗೂ ಕಾಳಗ ನಡೆಯುತ್ತದೆ.
ನ್ಯಗ್ರೋಧನ ಹೆಂಡತಿಯನ್ನು ವಿಶ್ವಾವಸು ಹಿಡಿದು ತಿನ್ನುತ್ತಾನೆ, ಆ ಸಮಯದಲ್ಲಿ ಮೆಲ್ಲನೇ ನ್ಯಗ್ರೋಧ ತನ್ನ ಶಿಶು ಶಬರಿಯ ಸಹಿತ ತಪ್ಪಿಸಿಕೊಂಡು ಕಾಡಿನ ಗುಹೆಯೊಂದನ್ನು ಸೇರಿ ತನ್ನ ಸತಿಗಾದ ಅವಸ್ಥೆಯನ್ನು ನೆನೆದು ಮರುಗುತ್ತಾನೆ.
ಈ ಮಗುವನ್ನು ಕಾಯುವಂತೆ ಆ ದುಷ್ಟನ ನಿಗ್ರಹಕ್ಕಾಗಿ ನ್ಯಗ್ರೋಧ, ಇಂದ್ರಾದಿಗಳ ಮೊರೆಯಿಟ್ಟು ಪ್ರಾರ್ಥಿಸುತ್ತಾನೆ, ಮೊದಲೇ ಕಷ್ಟದಿಂದ ಪರಿತಪಿಸುತ್ತ ಆರ್ತರಾಗಿ ದೇವತೆಗಳ ಮೊರೆಯಿಡುತ್ತಿದ್ದ ಮುನಿಜನರ ಪ್ರಾರ್ಥನೆಗೆ ಮುಗ್ಧ ವ್ಯಾಧನ ಪ್ರಾರ್ಥನೆ ಜತೆಯಾದಾಗ, ದೇವೇಂದ್ರ ನಭದಲ್ಲಿ ಪ್ರತ್ಯಕ್ಷನಾಗುತ್ತಾನೆ. ದೇವೇಂದ್ರನನ್ನು ಕಂಡು ಖಳ ವಿಶ್ವಾವಸು ಯುದ್ಧಕ್ಕಾಗಿ ನಭಕ್ಕೆ ನೆಗೆಯುತ್ತಾನೆ, ಘೋರ ಯುದ್ಧದಲ್ಲಿ ಇಂದ್ರ ವಜ್ರಾಯುಧದಿಂದ ಆತನ ತಲೆಗೆ ಬಡಿದಾಗ ಆತನ ತಲೆ ಅವನ ಹೊಟ್ಟೆಯ ಒಳಕ್ಕೆ ಇಳಿಯುತ್ತದೆ, ಮತ್ತೆ ಆ ರಭಸಕ್ಕೆ ಧರೆಗೆ ಬಿದ್ದಾಗ ಅವನ ಕೈಕಾಲ್ಗಳೂ ಉದರ ಸೇರಿಕೊಂಡು ರಕ್ಕಸ ನಡೆಯಲಾರದಂತಾಗುತ್ತಾನೆ.
ತನ್ನನ್ನು ಕೊಲ್ಲದೇ ಈ ರೀತಿ ಬಿಟ್ಟುದ್ಯಾಕೆಂದೂ ಕೃಷವಾದ ತನ್ನ ಈ ಶರೀರವಿನ್ನು ಪ್ರಾಣಿಗಳಿಗಾಹಾರವಾಗುವುದಾಗಿಯೂ ಖಳ ದೇವೇಂದ್ರನಲ್ಲಿ ಮರುಗುತ್ತಾ ಹೇಳುತ್ತಾನೆ, ಆಗ ದೇವೇಂದ್ರ ಯೋಜನಾಂತರಗಳವರೆಗೆ ಆತನ ಬಾಹುಗಳು ಬೆಳೆಯುವಂತೆ ಅನುಗ್ರಹಿಸುತ್ತಾನೆ, ಆ ಸೀಮೆಯಲ್ಲಿ ಸಂಚರಿಸುವ ಪ್ರಾಣಿಗಳನ್ನು ಮಾತ್ರ ಹಿಡಿದು ತಿನ್ನುವಂತೆ ಹೇಳುತ್ತಾನೆ. ಮುಂದೊಂದು ದಿನ ಶ್ರೀರಾಮ ದರ್ಶನದಿಂದ ಅವನ ಶಾಪ ವಿಮೋಚನೆಯಾಗುವುದೆಂದು ತಿಳಿಸಿ , ದೇವೇಂದ್ರ ತೆರಳುತ್ತಾನೆ. ವಿಶ್ವಾವಸು ಕಬಂಧ ನಾಮಕನಾಗುತ್ತಾನೆ.
===============
'ಸುಗ್ರೀವನ ಪ್ರವೇಶ'
ವಾಲಿ ಸುಗ್ರೀವರ ಕಾಳಗ
ವಾಲಿಯಿಂದ ಸೋತ ಸುಗ್ರೀವ ಸೂರ್ಯನ ಬಳಿಗೆ ತೆರಳುತ್ತಾನೆ.
ಸೂರ್ಯ ಸುಗ್ರೀವನನ್ನು ತನ್ನ ರಥದಲ್ಲಿಯೇ ಇರುವಂತೆ ತಿಳಿಸುತ್ತಾನೆ.
ಸೂರ್ಯನ ಮೇಲೆ ವಾಲಿಯ ಆಕ್ರಮಣದ ಯತ್ನ, ಸೂರ್ಯನ ಉರಿಯ ಕಾರಣ ವಾಲಿ ತನ್ನ ಯತ್ನದಲ್ಲಿ ವಿಫಲವಾಗುತ್ತಾನೆ ಹಿಂದಿರುಗುತ್ತಾನೆ.
ಸೂರ್ಯನ ತಾಪ ಹೆಚ್ಚಿದ ಕಾರಣ ಭೂಮಿಯಲ್ಲಿ ಹಾಹಾಕಾರವುಂಟಾಗುತ್ತದೆ, ಜಲಮೂಲಗಳೆಲ್ಲಾ ಬತ್ತಿರುವಾಗ ನ್ಯಗ್ರೋಧ ತನ್ನ ಮಗಳ ಜತೆ ದುಃಖದಿಂದ ಜಲಕ್ಕಾಗಿ ಹುಡುಕುತ್ತಾ ತೆರಳುತ್ತಾನೆ. ಕೊನೆಗೆ ಮಾಂಸಕ್ಕಾಗಿ ಕಾಡಿನಲ್ಲಿ ಕಂಡ ಚಿಗರೆಗಳ ಹಿಂಡನ್ನು ಬೆಂಬತ್ತುತ್ತಾ ಸಾಗುತ್ತಾನೆ.
ಅದೇ ವೇಳೆ ಕಾಳ್ಗಿಚ್ಚಿನಲ್ಲಿ ಸಿಲುಕಿದ ಕಬಂಧ, ಕರುಳು ಕರಗುವಂತೆ ರೋದಿಸುತ್ತಿರುತ್ತಾನೆ.
ಮೂಕಪ್ರಾಣಿಗಳೆಲ್ಲಾ ಪ್ರಾಣರಕ್ಷಣೆಗೋಸ್ಕರ ಮತಂಗ ಮುನಿಯ ಆಶ್ರಮವನ್ನು ಸೇರುತ್ತವೆ(ಪ್ರಾಣಿಗಳ ರೋದನದಿಂದ ಬಹುಶಃ) ಮುನಿ ಎಚ್ಚರಗೊಂಡು , ಕಾಳ್ಗಿಚ್ಚನ್ನು ಆರಿಸುವುದಕ್ಕೆ ವರುಣಮಂತ್ರವನ್ನು ಜಪಿಸಿ ಮಳೆಗರೆಸುತ್ತಾನೆ. ಏಳು ದಿನಗಳ ಪರ್ಯಂತ ಮಳೆ ಸುರಿಯುತ್ತದೆ, ಮಳೆಗೆ ಕಾಳ್ಗಿಚ್ಚು ನಂದಿತು ಮತ್ತೆ ಧರೆ ಹಸುರಾಗುತ್ತದೆ.
ನದಿ, ತೊರೆ, ಹಳ್ಳ ಕೊಳ್ಳಗಳು ಮರಳಿ ಜೀವ ಪಡೆಯುತ್ತವೆ, ಸಂತಸದಿಂದ ತನ್ನ ಪರ್ಣಕುಟಿಯಿಂದ ಹೊರಗೆ ಬಂದು ಈ ಸನ್ನಿವೇಷವನ್ನು ಗಮನಿಸುತ್ತಾ ನಡೆವ ಮತಂಗ ಮುನಿಗೆ ಋಷ್ಯಮೂಕದಿಂದ ಜಲರಾಶಿಯಿಳಿದು ಅದು ಸರೋವರವಾಗಿರುವುದು ಕಾಣುತ್ತದೆ ಅದನ್ನು ಪಂಪಾ ಸರೋವರವೆಂದು ಕರೆಯುತ್ತಾನೆ.
===========
ಮಯಾಸುರ ಹೇಮೆಯೆಂಬವಳನ್ನು ವರಿಸಿ, ದಾಂಪತ್ಯದ ಫಲವಾಗಿ ಈರ್ವರು ಗಂಡು ಮತ್ತೋರ್ವಾಕೆ ಹೆಣ್ಣು ಮಗಳನ್ನು ಪಡೆಯುತ್ತಾನೆ. ಹಿರಿಯನೇ ಮಾಯಾವಿ, ಕಿರಿಯ ದುಂದುಭಿ, ತರಳೆ ಮಂಡೋದರಿ. ಮಂಡೋದರಿಯ ವಿವಾಹ ರಾವಣನೊಡನೆ ನೆರವೇರಿರುತ್ತದೆ.
ಮಾಯಾವಿ ಜಗತ್ತನ್ನು ಗೆಲುವೆನೆಂಬ ಅಪೇಕ್ಷೆಯಿಂದ ಯುದ್ಧಕ್ಕಾಗಿ ತೆರಳಿರುತ್ತಾನೆ, ಆತನನ್ನು ವಾಲಿ ಸಂಹರಿಸಿರುತ್ತಾನೆ(ಈ ಕಥೆಗೆ ಪದ್ಯಗಳು ಇಲ್ಲಿ ಇಲ್ಲ, ಉಲ್ಲೇಖ ಮಾತ್ರವಿದೆ)
ಮುಂದೆ ದುಂದುಭಿ ಯುದ್ಧಕ್ಕೆ ತೆರಳಿ ಸಮುದ್ರನನ್ನು ಕರೆಯುತ್ತಾನೆ, ಆತ ಹಿಮವಂತನನ್ನು ತೋರಿಸುತ್ತಾನೆ, ಹಿಮವಂತ ವಾಲಿಯನ್ನು ತೋರಿಸುತ್ತಾನೆ
ವಾಲಿ x ದುಂದುಭಿ ಕಾಳಗ, ದುಂದುಭಿ ಮಾಯದ ಮಹಿಷಾಕೃತಿಯನ್ನು ತಾಳುತ್ತಾನೆ ಆದರೆ ವಾಲಿ ಅವನ ಕೋಡುಗಳಲ್ಲಿ ಹಿಡಿದೆತ್ತಿ ಗರ ಗರನೆ ತಿರುಗಿಸಿ ಧರೆಗಪ್ಪಳಿಸಲು ದುಂದುಭಿ ಸಾಯುತ್ತಾನೆ. ಬಳಿಕ ಆ ಕಳೇವರವನ್ನು ಎತ್ತಿ ತಿರುಗಿಸಿ ಎಸೆಯುತ್ತಾನೆ, ಅದು ತಗ್ಗಿನ ಪ್ರದೇಶದಲ್ಲಿದ್ದ ಮತಂಗರ ಆಶ್ರಮದ ಸಮೀಪ ಹೋಗಿ ಬೀಳುತ್ತದೆ, ತಮ್ಮಾಶ್ರಮಕ್ಕೆ ರಕ್ತದ ಹನಿಗಳ ಸೇಚನವಾದ್ದನ್ನು ಕಂಡು ಕೋಪಗೊಂಡ ಮತಂಗರು, ಈ ಕುಕೃತ್ಯವನ್ನೆಸಗಿವ ನಮ್ಮ ಆಶ್ರಮದ ಪರಿಸರಕ್ಕೆ ಹೊಕ್ಕರೆ ಸಾಯಲಿ ಎಂದು ಶಪಿಸುತ್ತಾರೆ.
ಈ ವಿಚಾರವನ್ನು ಚರರು ವಾಲಿಗೆ ತಿಳಿಸುತ್ತಾರೆ. ವಾಲಿ ಭಯಗೊಂಡು ಮತಂಗಾಶ್ರಮದಿಂದ ದೂರವಾಗಿರುತ್ತಾನೆ.
ಅತ್ತ ಈ ವಿಚಾರವನ್ನು ಸುಗ್ರೀವನಿಗೆ ತಿಳಿಸಿ ಸೂರ್ಯ ಆತನನ್ನು ಋಷ್ಯಮೂಕದಲ್ಲಿರುವಂತೆ ತಿಳಿಸುತ್ತಾನೆ.
ಸೂರ್ಯನಿಗೆ ಪದ್ಯಗಳು
ಸುಗ್ರೀವ ಋಷ್ಯಮೂಕಕ್ಕೆ ತೆರಳುತ್ತಾನೆ
-------
ಇತ್ತ ನ್ಯಗ್ರೋಧ ಮತ್ತು ಶಬರಿ ಕಾನನದಲ್ಲಿ ನಡೆದು ಬರುತ್ತಿರುವಾಗ ನ್ಯಗ್ರೋಧ ಕಬಂಧನ ಕರಗಳಿಗೆ ಸಿಲುಕುತ್ತಾನೆ, ತನ್ನ ಮರಣ ಸಮೀಪವಾಗಿದೆತೆಂಬುದನ್ನರಿತ ನ್ಯಗ್ರೋಧ ಓಡಿ ತಪ್ಪಿಸಿಕೊಳ್ಳುವಂತೆ ಶಬರಿಗೆ ಕೂಗಿ ತಿಳಿಸುತ್ತಾನೆ. ಕಬಂಧ ನ್ಯಗ್ರೋಧನನ್ನು ನುಂಗುವುದನ್ನು ಕಂಡು ಶಬರಿ ಮೂರ್ಛಿತಳಾಗುತ್ತಾಳೆ, ಮೂರ್ಛೆಯಿಂದೆದ್ದಬಳಿಕ ಮರುಗುತ್ತಾಳೆ.
ಜನಕ ನಿನ್ನಳಿವಾಯಿತೆ| ದೇವರಿಗಿದು|
ಮನಸಿಗೊಪ್ಪಿತವಾಯಿತೆ||
ಈ ರೀತಿ ದುಃಖಿಸುವ ಸಮಯದಲ್ಲಿ ಅಂಬರದಿಂದ ನಾರದ ಮುನಿಯಾಗಮಿಸುತ್ತಾನೆ
ಆಕೆಯನ್ನು ಕರೆತಂದು ದೂರದಿಂದ ಮತಂಗಾಶ್ರಮವನ್ನು ತೋರಿಸಿ ಅಲ್ಲಿಗೆ ತೆರಳಿ
ಮುನಿಯ ಆಶ್ರಯವನ್ನು ಪಡೆಯೆಂದು ತಿಳಿಸುತ್ತಾನೆ. ಶಬರಿ ಬಂದು ಧ್ಯಾನದೊಳಿರುವ ಮತಂಗರ ಮುಂದೆ ಕೈಮುಗಿದು ನಿಲ್ಲುತ್ತಾಳೆ, ಮತಂಗರು ಕಣ್ದೆರೆದು ಶಬರಿ ಯಾರೆಂದರಿತು, ಆಕೆಯನ್ನು ಸಂತೈಸುತ್ತಾರೆ, ಶಬರಿ ತನ್ನ ದುರ್ದೆಸೆಯನ್ನು ತನ್ನವರಿಗಾದ ದುರ್ಗತಿಯನ್ನು ಅರುಹುತ್ತಾಳೆ.
ಮತಂಗರು ಆಕೆಗೆ ಅಭಯವನ್ನಿತ್ತು ಆಕೆಯನ್ನು ಸಲಹುತ್ತಾರೆ.
=========
ವೈಕುಂಠದಲ್ಲಿ ಶ್ರೀದೇವಿಯೊಂದಿಗೆ ಮಹಾವಿಷ್ಣುವಿರಲು ದೇವೇಂದ್ರಾದಿ ಸುರರೂ, ಭೂದೇವಿಯೂ ಸ್ತುತಿಸುತ್ತಾ ಬರುತ್ತಾರೆ. ರಾವಣನ ದುಷ್ಕೃತ್ಯಗಳನ್ನು ದೂರಿ, ಆತನನ್ನು ಸಂಹರಿಸುವಂತೆ ಪ್ರಾರ್ಥಿಸುತ್ತಾರೆ. ಶ್ರೀಹರಿ ಶ್ರೀರಾಮಾವತಾರವನ್ನೆತ್ತುವ ಅಭಯವನ್ನೀಯುತ್ತಾನೆ.
=======
ಶಬರಿ - ಮತಂಗ ಮುನಿ
ಹೀಗೆ ಕಾಲ ಕಳೆಯುತ್ತಿರಲೊಂದಿನ ಜವ್ವನೆ ಶಬರಿ ಮತಂಗರಲ್ಲಿ ತನಗೆ ಗೋಚರಿಸಿದ ಸ್ವಪ್ನವೊಂದನ್ನು ವಿವರಿಸುತ್ತಾಳೆ.
ಕನಸು ಶುಭಸೂಚಕವೆಂದೂ ಜಗದ ಭಾಗ್ಯೋದಯದ ದಿನ ಬಂತೆಂದೂ ತಾನಿನ್ನು ವೈಕುಂಠಧಾಮವನ್ನೈದುವೆನೆಂದೂ ಅದರ ಮೊದಲು ನಿನಗೆ ವಿವಾಹನ್ನೆಸಗುವೆನೆನ್ನಲು ತನಗೆ ಮದುವೆ ಬೇಡವೆಂದೂ ದೇವರ ಬಗ್ಗೆ ತಿಳಿಸಬೇಕೆಂದೂ ಶಬರಿಯೆನ್ನುತ್ತಾಳೆ.
ದೇವರು ನಮ್ಮ ಕಲ್ಪನೆಯ ಪ್ರತಿರೂಪವೆಂದೂ ನೀನೆಣಿಸಿದ ರೂಪದಿಂದ ಗೋಚರಿಸುವನೆಂದೂ ಹೇಳಲು ತಂದೆಯೇ ನನಗೆ ದೇವರು ಬೇಡರ ರೂಪಿನಿಂದ ಇರುವಂತೆ ಮಾನಸದಲ್ಲಿ ಚಿತ್ರ ನೆಲೆಯಾಗಿಯೆಂತಲೂ ಹೇಳುತ್ತಾಳೆ.
ನಿನ್ನ ಮನದಾಸೆಯಂತೆಯೇ ನಡೆವುದು ಬೇಸರಿಸದೇ ಚಿತೆಯನ್ನು ಸಿದ್ಧಪಡಿಸೆಂದು ಸೂಚಿಸಿ, ಪದ್ಮಾಸನವನ್ನು ಬಲಿದು ಪಂಪಾತೀರದಲ್ಲಿ ಮತಂಗಮುನಿ ತನ್ನ ಭೌತಿಕ ದೇಹವನ್ನು ಕಳೆಯುತ್ತಾರೆ. ಅವರ ಶಿಷ್ಯಂದಿರೆಲ್ಲ ಸೇರಿ ಅವರ ದೇಹವನ್ನು ಅಗ್ನಿಗೆ ಸಮರ್ಪಿಸುತ್ತಾರೆ.
ವನವಾಸಿಯಾದ ಶ್ರೀರಾಮನ ರೂಪವನ್ನು ಬೇಡನ ರೂಪದಂತೆ ತಿಳಿದು ಚಿತ್ತಶುದ್ಧಿಯಿಂದ ಶಬರಿ ಸದಾ ಮಾನಸ ಪೂಜೆಯನ್ನು ನಡೆಸುತ್ತಾ ಲೌಕಿಕದ ಮೋಹವನ್ನು ಕಳೆದು ಹಲವು ಕಾಲ ಪರ್ಯಂತ ಕಾಯುತ್ತಲೇ ಇರುತ್ತಾಳೆ.
==============
ಸೀತಾಪಹಾರ....
ಸೀತಾಪಹಾರದ ಸನ್ನಿವೇಷದಲ್ಲಿ ಜಟಾಯು ರಾವಣನನ್ನು ತಡೆಯುತ್ತಾನೆ.
ಜಟಾಯು ರಾವಣನ ನಡುವೆ ಕಾಳಗ
ಜಟಾಯುವಿನ ಸೋಲು.
ಸೀತೆಯನ್ನು ಹುಡುಕುತ್ತಾ ರಾಮ ಲಕ್ಷ್ಮಣರು ಬರುತ್ತಾರೆ. ಜಟಾಯುವನ್ನು ಸಂಧಿಸಿ ಆತನ ಸಂಸ್ಕಾರಗಳನ್ನು ಮಾಡಿ ಮುಂದುವರಿಯುತ್ತಾ ಕ್ರೌಂಚವನವನ್ನು ಸೇರುತ್ತಾರೆ.
ಕಬಂಧ, ರಾಮ ಲಕ್ಷ್ಮಣರನ್ನು ಹಿಡಿದುಕೊಳ್ಳುತ್ತಾನೆ, ಶ್ರೀರಾಮ ಶರಪ್ರಯೋಗದಿಂದ ಆತನ ಕರಗಳನ್ನು ಖಂಡಿಸಲು, ಕಬಂಧ ರೋದಿಸುತ್ತಾ ತನ್ನ ದೇಹವನ್ನು ಸುಡಬೇಕಾಗಿ ಪ್ರಾರ್ಥಿಸುತ್ತಾನೆ. ವನಕಾಷ್ಟಗಳನ್ನು ಸೇರಿಸಿ ಕಬಂಧನ ದೇಹವನ್ನು ಸುಡಲು, ಗಂಧರ್ವನೋರ್ವ ಗೋಚರಿಸಿ , ತನ್ನ ವೃತ್ತಾಂತಗಳನ್ನು ತಿಳಿಸಿ ಮುಂದೆ ಶಬರಿಯೂ ನಿನಗಾಗಿ ಕಾಯುತ್ತಿದ್ದಾಳೆಂದು ಶ್ರೀರಾಮನಿಗೆ ಸೂಚಿಸಿ ಗಂಧರ್ವಲೋಕವನ್ನು ಸೇರುತ್ತಾನೆ.
ಅಲ್ಲಿಂದ ಹೊರಟು ಮುಂದೆ ಬರುವಾಗ ದೂರದಲ್ಲಿ ಮುದುಡಿ ಕೂತಿರುವ ವೃದ್ಧೆ ಶಬರಿ ರಾಮ ಲಕ್ಷ್ಮಣರಿಗೆ ಗೋಚರಿಸುತ್ತಾಳೆ. ಅವರು ಶಬರಿಯ ಬಳಿಗೆ ಬರುತ್ತಾರೆ.
ನೋಡಿದಳು ಕೈಹಣೆಗಿರಿಸಿ ನಗು| ಮೂಡಿರಲು ಹಲ್ಲಿರದ ಬಾಯಲಿ|
ಶಬರಿ ತನ್ನ ಮಾನಸ ಮೂರ್ತಿ ತನ್ನಿದಿರು ನಿಂತುದನ್ನು ಕಂಡು ಪುಳಕಿತಳಾಗಿ, ತನ್ನಿಂದಾದ ಸೇವೆಯನ್ನು ಮಾಡುತ್ತಾಳೆ.
ಹಣ್ಣು ಹಂಪಲುಗಳನ್ನು ತಿನ್ನುವುದಕ್ಕೆ ಕೊಡುತ್ತಾಳೆ, ಆ ರಾತ್ರಿ ಆಕೆ ಕುಳಿತು ತನ್ನ ಜೀವನ ವೃತ್ತಾಂತಗಳನ್ನು ತನ್ನ ಕಥೆಗಳನ್ನು ಶ್ರೀರಾಮ ಲಕ್ಷ್ಮಣರೊಡನೆ ಹಂಚಿಕೊಳ್ಳುತ್ತಾಳೆ.
ಸೀತೆಯನ್ನು ನೆನೆದು ಧುಃಖಿತನಾದ ಶ್ರೀರಾಮನಿಗೆ ಶಬರಿ ಸಾಂತ್ವನವನ್ನುಹೇಳುತ್ತಾಳೆ.
ಮರುದಿನ ಉದಯದಲ್ಲಿ ಶಬರಿಗೆ ಶ್ರೀ ಮಹಾವಿಷ್ಣುವಿನ ಕ್ಷೀರಸಾಗರ ಶಯನನ ವಿಶ್ವರೂಪ ದರ್ಶನವಾಗುತ್ತದೆ. ಮತ್ತು ಆಕೆಯ ದೇಹಾವಸಾನವಾಗುತ್ತದೆ.
ಉದಯದಲ್ಲಿ ಎದ್ದ ರಾಘವನಿಗೆ ಶಬರಿಯ ದೇಹಾವಸಾನವಾದುದು ತಿಳಿಯುತ್ತದೆ.
=====
ಇಂದ್ರ ಸಭೆಯಲ್ಲಿ ಶಾಪಮುಕ್ತ ತರುಣಿಯರ ನರ್ತನ
=====
ಮಂಗಲ